ಹುತ್ತರಿ ಕುಣಿತ
- 	ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೊಡಗಿನ ಒಂದು ಜನಪದ ನೃತ್ಯ. ಹಬ್ಬದ ಅಂಗವಾಗಿ ಊರಿನ ದೇವಸ್ಥಾನದ ಮಂದಿನಲ್ಲಿ (ಬಯಲಿನಲ್ಲಿ) ಒಂದು ವಾರ ಪರ್ಯಂತ ಕೋಲಾಟ ನಡೆಯುತ್ತದೆ. ಹಬ್ಬಕ್ಕೆ 4-5 ದಿನಗಳಿರುವ ಮೊದಲು ಗ್ರಾಮದ ಯುವಕರು, ಹಿರಿಯರು ಗ್ರಾಮದ ಮಂದಿನಲ್ಲಿ ಸೇರಿ ಕೋಲಾಟ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಈದ್ ಎಂದು ಹೆಸರು. ಈದ್ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಕೋಲಾಟದಲ್ಲಿ ಭಾಗವಹಿಸು ವವರು ಮತ್ತು ಕೋಲಾಟ ನೋಡಲು ಆಗಮಿಸುವವರು ದುಡಿ ಬಾರಿಸುವ ವಾದ್ಯಗಾರರೊಂದಿಗೆ ಮಂದಿಗೆ ಬರುತ್ತಾರೆ. ಅವರು ತಲುಪಿದಾಗ
ಬಾಳ್ ಬಾಳೆನ್ನಡ ಜಬ್ಬೂಮಿ ಬಾಳೋ
ಜಬ್ಬೂಮಿ ಮೀದಲೆ ಪೂಮಂದ್ ಬಾಳೋ
ಪೂಮಂದ್ ಮೀದಲ್ ದೇವಯ್ಯ ಬಾಳೋ
ದೇವಂಗೊತ್ತಾಚಾರ ಪಾಡಿಚೊ ನಂಗ
ಆಚಾರಪಾಡಿತ್ ಪಾಟ್ ಬೆಕ್ಕನ ಎಂಗ
	
(ಜೀವನ ಮಾಡು ಒಳ್ಳೆಯ ಭೂಮಿಯ ಮೇಲೆ, ಒಳ್ಳೆಯ ಭೂಮಿಯ ಮೇಲೆ ಚೆನ್ನಾಗಿ ಬಾಳು, ಒಳ್ಳೆಯ ಭೂಮಿಯ ಮೇಲೆ ದೇವಯ್ಯ ನೀನು ಬಾಳು, ದೇವರಿಗೆ ಒಪ್ಪುವಂಥ ಆಚಾರವಿಚಾರವನ್ನು ಹಾಡಿದೆವು ನಾವು. ಆಚಾರವನ್ನು ಹಾಡಿ ಪಾಡಿ ಹೇಳುವೆವು ನಾವು) ಎಂದು ಹಾಡಿ ವಾದ್ಯಗಾರರು ಹಾಡು ನಿಲ್ಲಿಸುತ್ತಾರೆ.

	ಅನಂತರ ಅನೇಕ ಬಗೆಯ ಕೋಲಾಟ ಪ್ರದರ್ಶಿತವಾಗುತ್ತದೆ. ಬೊಳಕಾಟ, ಪಡೆಕಳಿ ಇತ್ಯಾದಿ ನೃತ್ಯಗಳೂ ನಡೆಯುತ್ತವೆ. ಹಾಡುಗಳ ರೀತಿ ಧಾಟಿಗಳು. ಹಾಡಿನೊಂದಿಗೆ ನೃತ್ಯದ ಹೆಜ್ಜೆಗಳನ್ನೂ ಜೊತೆಜೊತೆಯಾಗಿಡುವಂತೆ ಪ್ರೇರೇಪಿಸುತ್ತವೆ. ಹುತ್ತರಿ ಕೋಲಾಟದ ಹಾಡುಗಳು ಪೊಯಿಲೇ ಪೊಯಿಲೇ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಈ ಹಾಡುಗಳಲ್ಲಿ ದೇವರ ಆಶೀರ್ವಾದವನ್ನು ಬೇಡುವ, ವಾದ್ಯದವರಿಗೂ ನೃತ್ಯದವರಿಗೂ ಸಲಹೆಗಳನ್ನು ಕೊಡುವ ವಿಚಾರಗಳೂ ಸರಸ ಮತ್ತು ಹಾಸ್ಯಪ್ರಸಂಗಗಳೂ ನಿರೂಪಿತವಾಗಿರುತ್ತವೆ.

	ಪಡೆಕಳಿ ಅಥವಾ ಪರಿಯಕಳಿ ಯುದ್ಧಪರಂಪರೆಗೆ ಸೇರಿದ ನೃತ್ಯ. ಶೂರ ಯುವಕರು ಪೆಟ್ಟುಗಳನ್ನು ತಡೆಯುವ ಗುರಾಣಿಯಂಥ ಸಾಧನವನ್ನು ತಮ್ಮ ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಉದ್ದವಾದ ಬೆತ್ತದ ಕೋಲನ್ನು ಹಿಡಿದು, ನಾನ್ ಬಾಳ್, ನೀನ್ ಬಾಳ್, ಏಡಕೂಡ ಇಳಿಯುವ ಜಂಙದಿ ಬಾಳ್. ಇಗ್ಯೆತಪ್ಪ ಬಾಳ್, ಬಯತೂರಪ್ಪ ಬಾಳ್, ಬಾಳ್ ಬಾಳರೇ ಬಾಳ್ ಎಂದು ಹೇಳುತ್ತ ಹೋರಾಟಕ್ಕೆ ಆಹ್ವಾನಿಸುತ್ತಾರೆ. ಈ ಆಟದಲ್ಲಿ ಪರಸ್ಪರ ಯಾರೂ ಕೂಡ ಮೊಣಕಾಲಿನ ಮೇಲೆ ಹೊಡೆಯಬಾರದು. ಆಟ ಒಂದು ಘಟ್ಟಕ್ಕೆ ಮುಟ್ಟಿದಾಗ (ಒಬ್ಬರಿಗಿಂತ ಮತ್ತೊಬ್ಬರ ಕೈ ಮೇಲಾಗಿದೆ ಎಂದು ತಿಳಿದಾಗ) ಆಟವನ್ನು ನಿಲ್ಲಿಸಿ, ಪರಸ್ಪರ ಅಪ್ಪಿಕೊಂಡು ಅಭಿನಂದಿಸಿ ಬೇರ್ಪಡುತ್ತಾರೆ.

	ಹುತ್ತರಿ ಹಬ್ಬದ ಸಂಜೆ ಅಥವಾ ಕೋಲಾಟ ನಡೆಯುವಷ್ಟು ದಿನ ಪ್ರತಿ ರಾತ್ರಿ ಗ್ರಾಮದ ಮನೆ ಮನೆಗೆ ಹೋಗಿ ಮನೆಹಾಡು ಹೇಳುವ ಸಂಪ್ರದಾಯವೂ ಇದೆ. ಮನೆಯವರನ್ನು ಹಾಡಿ ಹೊಗಳಿದ ಅನಂತರ ಅವರಿಂದ ಕಾಣಿಕೆಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಒಂದು ಮನೆಯ ಹಾಡು :
ನಂದಾಟ್ ಈ ಮನೆ ನಂದಿ ಮಹದೇವ
ಪತ್ತಾಯ ಚಿತ್ತಾರಿ ತೊನೆಯತಿರಡೊ
ತೊಟ್ಟಿಲ್ ಪಾಕು ಞತಪ್ಪತಿರಡೊ
ಕೊಟ್ಟಿಲ್ ಕರಪತ್ರ ತಪ್ಪತಿರಡೊ
ಪೊಟ್ಟಿಲ್ ಬೀರಾಳಿ ನೀಂಗತಿರಡೊ
ಬೆಪ್ಪಲ್ ಪೊಂಬಣನಂಗತಿರಡೊ
	(ಈ ಮನೆಯವರಿಗೆ ಮಂಗಳವನ್ನುಂಟುಮಾಡು ಮಹದೇವ. ಈ ಮನೆ ಎಲ್ಲ ದಿಕ್ಕಿನಲ್ಲೂ ಅಭಿವೃದ್ಧಿ ಹೊಂದಲಿ; ಇದರ ಉಗ್ರಾಣದಲ್ಲಿ ಸಣ್ಣಕ್ಕಿ ತುಂಬಿ ತುಳುಕಾಡುತಿರಲಿ, ಸದಾಕಾಲವೂ ತೊಟ್ಟಿಲಲ್ಲಿ ಹಾಲು ಹಸುಳೆ ನಗುತಿರಲಿ. ಕೊಟ್ಟಿಗೆಯಲಿ ಹಾಲು ಕರೆಯುವ ಹಸು ಇರಲಿ ಇತ್ಯಾದಿ).	
		
					(ಡಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ